ಇರ್ನೋಟ-
ಕಣ್ಣಿಗೆ ಕಾಣುವ ಒಂದೊಂದು ವಸ್ತುವೂ ಎರಡಾಗಿ ಕಾಣುವುದು (ಡಿಪ್ಲೋಪಿಯ). ಎರಡು ಕಣ್ಣುಗಳೂ ಒಂದೇ ಹೊತ್ತಿನಲ್ಲಿ ಒಂದು ವಸ್ತುವಿನ ಮೇಲೆ ಕೂಡದಿರುವುದೇ ಕಾರಣ. ಚೆನ್ನಾಗಿರುವ ಕಣ್ಣಿಗೆ ದಿಟಬಿಂಬ ಕಂಡರೆ ಕೆಟ್ಟಿರುವ ಕಣ್ಣು ಹುಸಿ ಬಿಂಬವನ್ನು ತೋರುತ್ತದೆ. ಕಣ್ಣುಗುಡ್ಡೆಯನ್ನು ಬೆರಳ ತುದಿಯಿಂದ ತುಸು ಒತ್ತಿ ಹಿಡಿದರೆ ಯಾರಿಗಾದರೂ ಇರ್ನೋಟ ಕಾಣುತ್ತದೆ. ಮಳ್ಳೆಗಣ್ಣಿನಲ್ಲಿ (ಸ್ಕ್ವಿಂಟ್) ಇದು ಬಲು ಸಾಮಾನ್ಯ ತೊಡಕು, ಇರ್ನೋಟ ಒಂಟಿ ಕಣ್ಣಿನದೋ ಇಗ್ಗಣ್ಣಿನದೋ ಆಗಿರಬಹದು. ಒಂಟಿಕಣ್ಣಿನ ಇರ್ನೋಟದ ಕಾರಣ ಕಣ್ಣಲ್ಲಿ ಓಸರಿಸುವ ನಡುವರ್ತಿಗಳ (ಡಿಫ್ರ್ಯಾಕ್ವಿವ್ ಮೀಡಿಯಂ) ವ್ಯತ್ಯಾಸಗಳು, ಕಣ್ಣುನೋಟದ ಕುಂದುಗಳು, ಅಸಮನಿಟ್ಟು (ಅಸ್ಟಿಗ್ಮಾಟಿಸಂ), ಎಡೆಬಿಟ್ಟ ಇಲ್ಲವೇ ಕೆಳಬಿದ್ದ ಕಣ್ಣಮಸೂರ (ಲೆನ್ಸ್), ಆಗತಾನೆ ತಲೆದೋರಿರುವ ಮೋತಿ ಬಿಂದು (ಕ್ಯಾಟರಾಕ್ಟ್), ಕಣ್ಣಿನ ಕೋಡುಪೊರೆಯ (ಕಾರ್ನಿಯಲ್) ಹೂ-ಆಗಿರಬಹುದು. ಒಂಟಿಕಣ್ಣಿನ ಇನ್ನಷ್ಟು ಕಾರಣಗಳು: 1 ಮೆಳ್ಳೆಗಣ್ಣಿನಲ್ಲಿ ಇದ್ದಂತೆ, ಕಣ್ಣುಗುಡ್ಡೆಯನ್ನು ಆಡಿಸುವ ಕಣ್ಣು ಹೊರಗಣ ಸ್ನಾಯುಗಳಲ್ಲಿ ಒಂದೋ ಎರಡೋ ನಿರ್ಬಲವಾದರೆ, ಇಲ್ಲವೆ ಬಹಳ ಎಳೆದರೆ, ಎರಡು ಕಣ್ಣುಗಳೂ ಒಂದೇ ವಸ್ತುವನ್ನು ನೋಡಿದಂತಾಗುವುದು. ಆಗ ಪಕ್ಕಕ್ಕೆಳೆವ, ಹುಸಿಬಿಂಬ ತೋರುವ, ಒಂದು ಕಣ್ಣನ್ನು ಮುಚ್ಚಿದರೆ ಇರ್ನೋಟ ಕಳೆವುದು. ಉದ್ದನಾದ ಸ್ನಾಯುವನ್ನು ಶಸ್ತ್ರಕ್ರಿಯೆಯಿಂದ ಸಾಕಷ್ಟು ಮೊಟಕು ಮಾಡಿ, ಮೋಟಾದುದನ್ನು ಕಿತ್ತು ಇನ್ನೂ ಹಿಂದಕ್ಕೆ ಹೊಲಿದು ಮೆಳ್ಳೆಗಣ್ಣನ್ನು ಸರಿಪಡಿಸಬಹದು; 2 ಒಂದು ಕಣ್ಣೊಳಗಿನ ಬಿಂಬದ ಜಾಗವನ್ನು ಕನ್ನಡಕದಿಂದ ಬದಲಿಸಿದರೂ ಎರಡಾಗಿ ಕಾಣುವುದು; ಮೋತಿಬಿಂದುವಿನ ಚಿಕಿತ್ಸೆಯಾಗಿ ಒಂಟಿ ಕಣ್ಣಿನ ಮಸೂರವನ್ನು ತೆಗೆದಾಗಲೂ ಎರಡಾಗಿ ತೋರುವುದು; 3 ಕಣ್ಗುಳಿಯಲ್ಲಿ (ಆರ್ಬಿಟ್) ಗಂತಿಯೋ ಕುರುವೋ ಎದ್ದರೆ ಕಣ್ಗುಡ್ಡೆ ಒತ್ತಿದಂತಾಗುವುದೂ ಒಂದು ಕಾರಣ; ಘನದರ್ಶನದಲ್ಲಿ (ಸ್ಟೀರಿಯೊಸ್ಕೊಪಿ) ವಸ್ತುಗಳ ಗಾತ್ರ, ಆಕಾರಗಳು ಚೆನ್ನಾಗಿ ಕಾಣಲು ಇರ್ನೋಟವೇ ಕಾರಣ. ಎರಡೂ ಕಣ್ಣುಗಳ ನೇರ ದಿಟ್ಟಿಗಳೂ ಒಂದೆಡೆ ಸಂಗಮಿಸದಿದ್ದರೆ (ಫೋಕಸ್) ಎರಡಾಗಿ ತೋರುವುದು. ಕಣ್ಗುಡ್ಡೆಗಳ ರೋಗಗಳು, ತಲೆಯ ನರಗಳ ಅರನಾರಿಯಿಂದ (ಪೆರಾಲಿಸಿಸ್) ಸ್ನಾಯು ಆಡದಂತಾಗುವುದು, ಹಿಮ್ಮಿದುಳಿನ (ಸೆರಿಬೆಲ್ಲಂ), ಮುಖ್ಯ ಮಿದುಳಿನ (ಸೆರಿಬ್ರಂ), ಮಿದುಳು ಪೊರಿಗಳ (ಮೆನಿಂಜಿಸ್) ರೋಗಗಳಲ್ಲಿ ಇದು ಸಾಮಾನ್ಯ. ಕಾಣಿಸುವ ಎರಡರಲ್ಲಿ, ದೂರದಲ್ಲಿರುವಂತೆ ತೋರುವುದೇ ದಿಟವಾದುದು, ಇನ್ನೊಂದು ಹುಸಿ. ವಸ್ತು ಎರಡಾಗಿ ಕಾಣುವಾಗ, ದಿಟ, ಹುಸಿ ಬಿಂಬಗಳು ಆಯಾ ಕಣ್ಣಿನ ಪಕ್ಕಗಳಲ್ಲಿದ್ದು ಅಡ್ಡಡ್ಡನಾಗಿರಬಹುದು (ಕ್ರಾಸ್ಡ್); ಮೇಲೋ ಕೆಳಗೋ ಇದ್ದು ನೀಟಾಗಿರಬಹದು (ವರ್ಟಿಕಲ್).
(ನೋಡಿ- ಅಸಮನಿಟ್ಟು-(ಅಬಿಂದುಕತೆ))
(ನೋಡಿ- ನೋಟ)
(ನೋಡಿ- ಮೆಳ್ಳೆಗಣ್ಣು,-ಮಾಲಗಣ್ಣು)
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ